ಕನ್ನಡದ ಹೊಸ ಆಶಯದ ಕಥೆಗಳ ಮಲ್ಲಿಗೆ ಹೂವಿನ ಸಖ

-ನಾಗೇಶ್ ಜೆ. ನಾಯಕ 

ಸವದತ್ತಿ


ಕಥೆಗಾರ, ಸಂಗಾತ ಸಾಹಿತ್ಯ ಪತ್ರಿಕೆಯ ಸಂಪಾದಕ ಟಿ. ಎಸ್. ಗೊರವರ 'ಮಲ್ಲಿಗೆ ಹೂವಿನ ಸಖ' ಎಂಬ ಹೊಸ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಸಾಹಿತ್ಯ ಲೋಕದಲ್ಲಿ ಈಗಾಗಲೇ ತಮ್ಮ ವಿನೂತನ ಬರವಣಿಗೆ ಶೈಲಿಯಿಂದಲೇ ಗುರುತಿಸಿಕೊಂಡಿರುವ ಗೊರವರ, ಗ್ರಾಮೀಣ ಸೊಗಡಿನ, ದಟ್ಟ ಅನುಭವಗಳ ಕಥಾನಕವನ್ನು ಕಟ್ಟಿ ಕೊಡುತ್ತಾ ಓದುಗರನ್ನು ಆಪ್ತವಾಗಿ ಸೆಳೆದುಕೊಂಡವರು. 'ಭ್ರಮೆ' ಮತ್ತು 'ಕುದರಿ ಮಾಸ್ತರ' ಎಂಬ ಎರಡು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಅವರು 'ಆಡೋ ಕಾಯೋ ಹುಡುಗನ ದಿನಚರಿ' ಎಂಬ ಅನುಭವ ಕಥನಗಳ ಮೂಲಕವೂ ಚಿರಪರಿಚಿತರೆನಿಸಿದ್ದಾರೆ. ಸಂಕಲನದಲ್ಲಿ ಆರು ಕತೆಗಳಿದ್ದು, ಗ್ರಾಮೀಣ ಪ್ರದೇಶದ ನೈಜ ಸಮಸ್ಯೆಗಳಾದ ಬಡತನ, ಹೆಣ್ಣಿನ ಶೋಷಣೆ, ವ್ಯಸನ, ಮೌಢ್ಯ, ವಿಚಿತ್ರ ಖಾಯಿಲೆಗಳು ವಿಷಯವಸ್ತುಗಳಾಗಿ ಗಮನ ಸೆಳೆಯುತ್ತವೆ. ಕಥೆಗಳಲ್ಲಿ ಬಳಸುವ ಪ್ರಾದೇಶಿಕ ಭಾಷೆ ಕೂಡ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಅವರೇ ಹೇಳುವಂತೆ "ಕಣ್ಣಿಗೆ ಕಂಡದ್ದು, ದಕ್ಕಿದ್ದು, ಅನುಭವಿಸಿದ್ದು, ಬಿಟ್ಟೂ ಬಿಡದೇ ಕಾಡಿದ್ದು ಇಲ್ಲಿ ಕಥೆಯಾಗಿವೆ. ಓತಪ್ರೋತವಾಗಿ ಬರೆಯುವುದು ನನಗಿಷ್ಟವಿಲ್ಲ; ನನ್ನ ಶೈಲಿಯೂ ಅದಲ್ಲ ಎಂದು ಸದಾ ಹೊಸತನಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳುವ ಅವರು ಇಷ್ಟವಾಗುವುದು ಅದೇ ಕಾರಣಕ್ಕೆ.

ಸಂಕಲನಕ್ಕೆ ಮೊದಲ ಮಾತುಗಳನ್ನು ಆಡಿದ ಎಸ್. ಎಫ್. ಯೋಗಪ್ಪನವರ ಹೇಳುವಂತೆ "ಅಪ್ಪಟ ಗ್ರಾಮೀಣ ಪ್ರತಿಭೆಯಾದ ಗೊರವರ, ತಮ್ಮ ಅಂತಮರ್ುಖಿ ಅನುಭವಗಳು ಹಾಗೂ ಸಂಯಮದ ಭಾಷೆಯಿಂದ ಓದುಗನನ್ನು ಒಳಗೆಳೆದುಕೊಳ್ಳುತ್ತಾರೆ. ಬೆಳಕಿನ ಕೋಲಿನಂತೆ ಕಾಣುವ ಈ ಕಥೆಗಾರ ಬಳಸುವ ಭಾಷೆ ಹಾಗೂ ಆಯ್ಕೆ ಮಾಡಿಕೊಂಡ ವಸ್ತುಗಳು ಎಷ್ಟು ತಾಜಾ ಆಗಿವೆಯೆಂದರೆ ಮಹಾಸೃಜನಶೀಲರೆಂದು ಕೂಗು ಹೊಡೆಯುವ ಅಕಾಡೆಮಿಕ್ ದರಿದ್ರರ ಮುಖಕ್ಕೆ ತಿಕ್ಕಿದ ಕನ್ನಡಿ ಹಿಡಿದಂತಿದೆ." ಸಂಕಲನದ ಎಲ್ಲ ಕಥೆಗಳನ್ನು ಓದಿದ ಮೇಲೆ ನಮಗೂ ಹಾಗೆಯೇ ಅನಿಸದೇ ಇರದು.

ಸಂಕಲನದ ಮೊದಲ ಕಥೆ 'ಮನಸಿನ ವ್ಯಾಪಾರ' ಶುರುವಾಗುವುದೇ ಪರಮೇಶಿಗೆ ರಾತ್ರಿ ಬೀಳುವ ಒಂದು ಕನಸಿನಿಂದ. ಪರಮೇಶಿ ಮತ್ತು ದೆಹಲಿಯಲ್ಲಿ ಮಾಸ್ತರನಾದ ಗೆಳೆಯ ಸೇರಿಕೊಂಡು ಯಾವುದೋ ಪಟ್ಟಣದಲ್ಲಿ ಟೋಪಿ ಮಾರುತ್ತಿರುವಂತೆ ಬೀಳುವ ಕನಸನ್ನು ನೆನಪಿಸಿಕೊಂಡು ಅವಮಾನದಿಂದ ಕುದ್ದು ಹೋಗುವ ಪರಮೇಶಿ, ಇಡೀ ದಿನ ಬಿದ್ದ ಕನಸಿನ ಮರ್ಮ ಹೊಳೆಯದೆ ಚಂಚಲಿತನಾಗುತ್ತಾನೆ. ವಿನಾಕಾರಣ ಹೆಂಡತಿ ಹಾಗೂ ಕಂಡವರ ಮೇಲೆ ರೇಗಾಡುವುದು ಶಾಂತ ಸ್ವಭಾವದ ಪರಮೇಶಿಗೆ ಒಗಟಾಗಿ ಕಾಣುತ್ತದೆ. ಸಾಲದ್ದಕ್ಕೆ ಶಾಲೆಯಲ್ಲಿ ಹುಡುಗಿಯೊಬ್ಬಳ ಬಾಯಲ್ಲಿ ಟೊಪ್ಪಿಗೆಯ ಹಾಡೇ ಪ್ರತಿಧ್ವನಿಸಿ ಕನಸು ವಾಸ್ತವದಲ್ಲೂ ಗೋಚರಿಸಿ ಕತೆಗೆ ಹೊಸ ತಿರುವನ್ನು ನೀಡುತ್ತದೆ. ನಿತ್ಯದ ಸಾಮಾನ್ಯ ಸಂಗತಿಗಳು, ಕಥೆಯ ಪಾತ್ರಗಳು, ಸೂಕ್ಷ್ಮಗ್ರಹಿಕೆಗಳನ್ನು ಲೇಖಕ ಕಟ್ಟಿಕೊಡುವ ರೀತಿ ವಿಶಿಷ್ಟವೆನಿಸುತ್ತವೆ. 

'ಕತ್ತಲಿನಾಚೆ' ಕಥೆ ಹಳ್ಳಿಗಾಡಿನ ಸಂಪ್ರದಾಯದ ಸಂಕೋಲೆಯಲ್ಲಿ ನಲುಗಿ ಹೋಗುವ ಮುಗ್ಧ ಹೆಣ್ಣೊಬ್ಬಳ ದಾರುಣ ಸ್ಥಿತಿಯನ್ನು ಕಣ್ಮುಂದೆ ತರುತ್ತದೆ. ಮಗು ಹೆರುವ ಸಾಮಥ್ರ್ಯ ಹೆಂಡತಿಗೆ ಇಲ್ಲವೆಂದು ಅತ್ತೆ, ಗಂಡ, ಮಾವನಿಂದ ಪೀಡನೆಗೊಳಪಡುವ ಪದ್ಮಾ, ಗಂಡನಿಗೆ ಇನ್ನೊಂದು ಮದುವೆ ತಯಾರಿ ನಡೆದಾಗ ಮತಿಭ್ರಮಣೆಗೊಂಡು ಊರೂರು ಅಲೆಯುವ ಸ್ಥಿತಿಗೆ ತಲುಪುತ್ತಾಳೆ. ಕೊನೆಗೂ ಆಕೆ ಗಭರ್ಿಣಿಯಾಗಿ ಗಂಡನಿಗೆ ಗಂಡು ಮಗುವನ್ನು ಹೆತ್ತು ಕೊಡುವ ವಿಚಿತ್ರ ಸನ್ನಿವೇಶ ನಿಮರ್ಾಣವಾಗುತ್ತದೆ. ಹೆಂಡತಿಯನ್ನು ಬಲಿಪಶು ಮಾಡಲು ಹೋಗಿ ತಾನೇ ಅದರ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಾನೆ ಗಂಡ. "ಬೇವಿನಮರದ ಮೈಚಾಚಿದ ರೆಂಬೆ ಕೊಂಬೆಗಳು ಆರೋಗ್ಯಪೂರ್ಣ ತರುಣಿಯಂತೆ ಕಾಣಿಸುವುದು, ಎರಡು ಸಗಣಿ ಹುಳುಗಳು ಸಣ್ಣದೊಂದು ಸಗಣಿ ಉಂಡೆಯನ್ನು ತಮ್ಮ ದಾರದಂತಹ ತೆಳು ಕಾಲುಗಳಿಂದ ಉರುಳಿಸುತ್ತಿರುವುದು, ಸೆಕೆಯಿಂದ ಸೆಲೆಯೊಡೆಯತೊಡಗಿದ್ದ ಬೆವರೇನೋ ನಿಂತಿತು. ಆದರೆ, ಎದೆಯೊಳಗೆ ಮೀಟತೊಡಗಿದ್ದ ಎಂಥದೋ ಸಂಕಟ ನಿಲ್ಲುತ್ತಿಲ್ಲ ಎನ್ನುವ ಸಾಲುಗಳಲ್ಲಿ ಕಟ್ಟಿಕೊಡುವ ರೂಪಕಗಳು ಸಹಜವಾಗಿ ಮೂಡಿ ಖುಷಿ ನೀಡುತ್ತವೆ.

ಮುನ್ನುಡಿಯಲ್ಲಿ ಯೋಗಪ್ಪನವರ್ ಹೇಳಿರುವಂತೆ ಕನ್ನಡದ ಉತ್ತಮ ಕಥೆಗಳ ಸಾಲಿಗೆ ಸೇರುವಂತಹ ಅದ್ಭುತ ಕಥೆ 'ಪೆಪ್ಪರುಮಂಟ'. ಬಡತನದಲ್ಲಿ ಬೆಳೆದ ಸಣ್ಣ ಹುಡುಗನಾದ ಮಲ್ಲನು ಪೆಪ್ಪರಮಂಟನ್ನು ತನ್ನದಾಗಿಸಿಕೊಳ್ಳಲು ಮಾಡುವ ಹರಸಾಹಸ ಇಲ್ಲಿ ಚಿತ್ರಿತವಾಗಿದೆ. ಒಂದು ಪೆಪ್ಪರಮಂಟನ ಆಸೆಗಾಗಿ ತನ್ನ ಬದುಕನ್ನೇ ಬೆಂಕಿ ಜ್ವಾಲೆಗೆ ಅಪರ್ಿಸುವ ಬಡತನದ ಬೇಗೆಯ ಉರಿ ಕತೆಯ ತುಂಬ ಅನಾವರಣಗೊಂಡಿದೆ. ಸಂಕಲನದ ಶೀಷರ್ಿಕೆಯ ಕಥೆ 'ಮಲ್ಲಿಗೆ ಹೂವಿನ ಸಖ' ತನ್ನದೆ ವಿಭಿನ್ನ ಶೈಲಿ, ಸಹಜ ನಡಿಗೆಯಿಂದ ಆಪ್ತವೆನಿಸುತ್ತದೆ. ಕಥಾನಾಯಕ ಯಮನೂರಪ್ಪ ಮಗುವಾದಾಗಿನಿಂದ ಹಿಡಿದು ಮದುವೆಯ ವಯಸ್ಸಿನವರೆಗೂ ಮಲ್ಲಿಗೆ ಹೂವಿನ ಸಖ್ಯ ಬೆಳೆಸಿಕೊಂಡಿರುತ್ತಾನೆ. ಎಲ್ಲಿಯೇ ಮಲ್ಲಿಗೆ ಹೂವಿನ ಸೆಳೆತಕ್ಕೆ ಸಿಲುಕಿದರೂ ಭಾವನಾ ಲೋಕಕ್ಕೆ ಜಾರಿ, ತನ್ನನ್ನೇ ತಾನು ಮರೆಯುವ ಹಂತ ತಲುಪಿದಾಗ ಅದು ಹಲವು ಅವಾಂತರಗಳಿಗೆ ಕಾರಣವಾಗುತ್ತದೆ. ವೈದ್ಯಲೋಕಕ್ಕೂ ಉತ್ತರ ಸಿಗದ ಖಾಯಿಲೆ, ಗೊರವರ ಕಥೆಯಲ್ಲಿ ಅಭಿವ್ಯಕ್ತವಾಗಿ ಮಲ್ಲಿಗೆಯ ಸಖ್ಯದಲ್ಲಿ ಸಿಲುಕುವಂತೆ ಮಾಡುತ್ತದೆ.

ಸಂಕಲನದ ಇನ್ನೊಂದು ಕಥೆ 'ದೇವರಾಟ' ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡು ಬರುವ ವ್ಯಸನಗಳ ಅನಾವರಣವನ್ನು ಮಾಡಿಸುತ್ತದೆ. ಎಷ್ಟೋ ಹುಲಗಮ್ಮನಂಥ ಹೆಣ್ಣುಮಕ್ಕಳು ಹಳ್ಳಿಯಲ್ಲಿ ಸಂಕಟಪಡುವ ಕೌಟುಂಬಿಕ ಚಿತ್ರಣ ಕೂಡ ಕಥೆಯಲ್ಲಿ ಎದ್ದು ಕಾಣುತ್ತದೆ. ತನ್ನ ಓಸಿ ಆಡುವ ಚಟಕ್ಕೆ ಹೊಲ ಮಾರಲು ಸಿದ್ಧನಾಗುವ ಹನುಮ, ಹೆಂಡತಿ ಹುಲಗಮ್ಮನಿಗೆ ಹೊಡೆದು ಬಡಿದು ಮಾಡಿ ತಂದೆ ಶಂಕ್ರಜ್ಜನನ್ನು ಹೆದರಿಸುತ್ತಾನೆ. ಅವನ ಹೊಲ ಮಾರುವ ಇರಾದೆಯನ್ನು ಬಿಡಿಸಲು ರಾಮಪ್ಪ ಮತ್ತು ಶಂಕ್ರಜ್ಜ ಮಾಡಿದ ಉಪಾಯವೇನು ಎಂಬುದನ್ನು ಪೂರ್ಣ ಕಥೆ ಓದಿಯೇ ತಿಳಿಯಬೇಕು. 'ಕದ್ದು ನೋಡುವ ಚಂದಿರ' ಕಥೆಯಲ್ಲಿ ಗೊರವರ ಚಂದ್ರನನ್ನು ರೂಪಕವಾಗಿಟ್ಟುಕೊಂಡು ಊರ ಬೀದಿ, ಮನೆ ಮಂದಿಯ ಅಂತರಂಗದೊಳಗೊಂದು ತಿರುಗು ಹಾಕಿಸಿ, ಗುಟ್ಟುಗಳ ಬೇಧಿಸುವ, ನಿಗೂಢಗಳ ಪತ್ತೆ ಹಚ್ಚುವ ಉಮೇದಿಯಲ್ಲಿ ತೊಡಗುತ್ತಾರೆ. ಎದುರಾಗುವ ಭಿನ್ನ ಭಿನ್ನ ಮನೋಸ್ಥಿತಿಗಳ ಜನರನ್ನು ಕಂಡ ಚಂದ್ರ ನಾಚಿ ಕರಗಿ ಹೋಗುತ್ತಾನೆ. 

ಹೀಗೆ ತಮ್ಮ ಕಥೆಗಳಲ್ಲಿ ಹೊಸತನವನ್ನೇ ತುಂಬಿ ತಂದಿರುವ ಗೊರವರ ಗ್ರಾಮೀಣ ಪರಿಸರದ ದಟ್ಟ ಅನುಭವಗಳನ್ನು, ಸಣ್ಣ ಸೂಕ್ಷ್ಮಗಳನ್ನು ಅಚ್ಚರಿಗೊಳಿಸುವಷ್ಟರ ಮಟ್ಟಿಗೆ ಕಾಣಿಸಬಲ್ಲರು. ತಮ್ಮ ಬರವಣಿಗೆಯ ನಿಲುವಿಗೆ ಬದ್ಧರಾಗಿ ಸದಾ ಹುಡುಕಾಟದ ಹಾದಿಯಲ್ಲಿರುವ ಅವರು ನಮ್ಮ ಮಧ್ಯದ ಸೃಜನಶೀಲ ಬರಹಗಾರ, ಅಸಲಿ ಪ್ರತಿಭೆ ಅನಿಸಿಕೊಳ್ಳುತ್ತಾರೆ. ಕಾಡಿನ ಹಣ್ಣಿಗೆ ವಿಚಿತ್ರ, ಊಹಿಸಲಾರದ ರುಚಿ ದಕ್ಕಿರುವಂತೆ ಗೊರವರ ಕಥೆಗಳಿಗೂ ಅಪರೂಪದ ಆತ್ಮ ದಕ್ಕಿದೆ. ಇನ್ನಷ್ಟು ಹೊಸ ಹೊಳಹುಗಳುಳ್ಳ ಕಥೆಗಳನ್ನು ನೀಡುವುದರ ಮೂಲಕ ಓದುಗರನ್ನು ಚಿಂತನೆಗೆ ತೊಡಗಿಸಲಿ ಎಂದು ಹಾರೈಸುತ್ತ ಗೊರವರ ಅವರ ಕಥಾ ಸಂಕಲನಕ್ಕೆ ಶುಭ ಕೋರುತ್ತೇನೆ.