ಕಾಲುವೆಗಳಿಗೆ ನೀರು: ಸದುಪಯೋಗಿಸಿಕೊಳ್ಳಲು ರೈತರಿಗೆ ಸವದಿ ಕರೆ

ಸಂಬರಗಿ 18: ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷಗಳಲ್ಲಿ ಕಾಲುವೆ ನೀರು ಒಂದು ತಿಂಗಳು ಮುಂಚಿತವಾಗಿ ಪ್ರಾರಂಭವಾಗಿದೆ. ಕರಿ ಮಸೂತಿ ಮತ್ತು ತುಂಗಲ್ ಸಾವಳಗಿ ಕಾಲುವೆಗಳಿಗೆ ನೀರು ಬಿಡಲಾಗಿದೆ. ಆಗಸ್ಟ್‌ನಲ್ಲಿ ಕೆರೆ ತುಂಬಿಸುವ ಕಾರ್ಯ ನಡೆಯಲಿದೆ. ಆರಂಭದಲ್ಲೇ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. 

ಹಳ್ಯಾಳ ಗ್ರಾಮದ ಹೊಲವಲಯದ ಜಾಕ್‌ವೆಲ್ಲದ ಕಾಲವೆ ನೀರು ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಪೂರ್ವ ಭಾಗದ ಅಮ್ಮಾಜೇಶ್ವರಿ ನೀರಾವರಿ ಯೋಜನೆ ಕಾಮಗಾರಿಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ ಪ್ರತಿ ಗ್ರಾಮದ ಪ್ರತಿಯೊಬ್ಬ ರೈತರ ಜಮೀನಿಗೆ ನೀರು ಒದಗಿಸುವ ಕಾರ್ಯ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಯಾವುದೇ ಕೆಲಸವನ್ನು ಮಾಡುವಾಗ ಮನುಷ್ಯನು ಮುಂದಿನ ಗುರಿಯನ್ನು ತಲುಪಲು ಶ್ರಮಿಸಬೇಕು. ಆಗ ಮಾತ್ರ ನೀವು ಯಶಸ್ಸು ಪಡೆಯುತ್ತೀರಿ. ರೈತನ ಜಮೀನಿಗೆ ಅನುಕೂಲ ಮಾಡಿಕೊಡುವ ಮೂಲಕ ಸದಾ ಹಸಿರಿನಿಂದ, ಪ್ರತಿ ಗ್ರಾಮಗಳಲ್ಲಿ ನೀರಿನ ಯೋಜನೆ ಜಾರಿಗೊಳಿಸಿ ಬರ ಮುಕ್ತ ಮಾಡುವ ಉದ್ದೇಶ ನನ್ನದಾಗಿದೆ ಎಂದು ಹೇಳಿದರು. 

ದಿವ್ಯ ಸಾನಿಧ್ಯ ವಹಿಸಿ ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿ ಮಾತನಾಡುತ್ತ ಸಕಾಲದಲ್ಲಿ ರೈತರಿಗೆ ಅಗತ್ಯ ಸೇವೆ ಒದಗಿಸಿಕೊಟ್ಟರೆ ರೈತರು ಸದಾ ನೆಮ್ಮದಿಯಿಂದ ಇರುತ್ತಾರೆ, ಸರಕಾರಕ್ಕೆ ಸಾಲ ಕೊಡುವ ಶಕ್ತಿಯನ್ನೂ ತಳ್ಳಿ ಹಾಕುವಂತಿಲ್ಲ. ಶಾಸಕರಾದ ಲಕ್ಷ್ಮಣ ಸವದಿ ಕ್ಷೇತ್ರ ಅಭಿವೃದ್ಧಿಗೆ ಮುಂದಾಗಿದ್ದು ಪ್ರಥಮವಾಗಿ ರೈತರ ಜಮೀನಿಗೆ ನೀರು ಕೊಟ್ಟು ಹಸಿರು ಕ್ರಾಂತಿ ಮಾಡುವ ಗುರಿ ಹೊಂದಿದ್ದಾರೆ. ಅವರದು ಮಾತು ಕಡಿಮೆ ಕೆಲಸ ಹೆಚ್ಚು. ಆ ಕಾರಣದಿಂದ ಕ್ಷೇತ್ರ ಅಭಿವೃದ್ಧಿಗೆ ಮುಂದಾಗಿದೆ ಎಂದರು. 

ಬಾಬು ಮಹಾರಾಜ, ಕಾಂಗ್ರೆಸ ಮುಖಂಡ ಸದಾಶಿವ ಭೂಟಾಳಿ, ಗಜಾನನ ಮಂಗಸುಳಿ, ಕೆಪಿಸಿಸಿ ಸದಸ್ಯರಾದ 

ಚಿದಾನಂದ  ಮುಕಣಿ, ರೈತ ಸಂಘದ ಮುಖಂಡರಾದ ಮಹಾದೇವ ಮಡಿವಾಳ, ಶಿವು ಗುಡ್ಡಾಪುರ, ಎಸಿ ನಾಗರಾಜ, ಅಭಿಯಂತರಾದ ಕೆ. ರವಿ, ಪ್ರವೀಣ ಹುನಶೀಕಟ್ಟಿ, ಗುತ್ತಿಗೆದಾರ ಬೋಸಲೆ ಹಾಗೂ ರೈತರು ಉಪಸ್ಥಿತರಿದ್ದರು.