ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ: ಹಿರೇಅರಳಿಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

National Health Programme: Quiz competition for students at Hirearalihalli

ಕೊಪ್ಪಳ 29: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಲಬುರ್ಗಾ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಿರೇಅರಳಿಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ “ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ” ಕುರಿತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಮುಂಜಾಗೃತೆ ತೆಗೆದುಕೊಳ್ಳುವ ಕುರಿತು, ನಿರಂತವಾಗಿ ವಿವಿಧ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು. 

ಬಳಿಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಆರ್‌.ಸಿ.ಹೆಚ್ ಕಾರ್ಯಕ್ರಮ, ರಾಷ್ಟ್ರೀಯ ಶ್ರವಣದೋಷ ನಿವಾರಣಾ ಮತ್ತು ನಿಯಂತ್ರಣ ಕಾರ್ಯಕ್ರಮ, ಹದಿಹರೆಯದವರ ಆರೋಗ್ಯದ ಮಹತ್ವ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಮಾನಸಿಕ ಆರೋಗ್ಯ ಕಾರ್ಯಕ್ರಮ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಐ.ಡಿ.ಎಸ್‌.ಪಿ, ಅಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಇತರೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಕುರಿತು ವಿವರವಾಗಿ ಮಾತನಾಡಿದರು.  

ಸ್ಪರ್ಧೆಯಲ್ಲಿ 6 ತಂಡಗಳು ಭಾಗವಹಿಸಿದ್ದು, ಅದರಲ್ಲಿ ರಾಣಿ ಅಬ್ಬಕ್ಕದೇವಿ ತಂಡ ಪ್ರಥಮ(ರೂ.750), ಕಿತ್ತೂರಾಣಿ ಚನ್ನಮ್ಮ ತಂಡ ದ್ವಿತಿಯ(ರೂ.500) ಹಾಗೂ ಇಮ್ಮಡಿ ಪುಲಿಕೇಶಿ ತಂಡ ತೃತಿಯ(ರೂ250) ಬಹುಮಾನಗಳನ್ನು ಪಡೆದುಕೊಂಡವು. ಬಹುಮಾನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಕಾರ್ಯಕ್ರಮ ಆಯೋಜಕರು ತಿಳಿಸಿದರು. 

ಕಾಲೇಜಿನ ಪ್ರಾಂಶುಪಾಲರಾದ ದೊಡ್ಡಪ್ಪ ತಳವಾರ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಳ್ಳುವ ಇಂತಹ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಸುತ್ತ ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದರು.  

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಶಂಕ್ರಯ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶೋಭಾ ಪತ್ತಾರ, ಸಮುದಾಯ ಆರೋಗ್ಯಾಧಿಕಾರಿ ಬಸವರಾಜ ಮತ್ತು ಪ್ರಭು ಸೇರಿದಂತೆ ಕಾಲೇಜಿನ ಸಹಉಪನ್ಯಾಸಕ ವರ್ಗದವರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.