ಕಾಂಚನಜುಂಗಾ ರೈಲು ಅಪಘಾತ: 15 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ನವದೆಹಲಿ 17: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಕಾಂಚನಜುಂಗಾ ರೈಲು ಅಪಘಾತದಲ್ಲಿ ಕನಿಷ್ಠ 15 ಜನರ ಸಾವನ್ನಪ್ಪಿದ್ ಘಟನೆ ನಡೆದಿದೆ. 

ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಸುಮಾರು 19 ರೈಲು ಗಳ ಸೇವೆಯನ್ನು ಭಾರತೀಯ ರೈಲ್ವೇ ಇಲಾಖೆ ರದ್ದುಗೊಳಿಸಿದೆ. ನ್ಯೂ ಜಲ್ಪೈಗುರಿ, ಸಿಲಿಗುರಿ ಜಂಕ್ಷನ್, ಬಾಗ್ಡೋಗ್ರಾ ಮತ್ತು ಅಲುಬಾರಿ ರಸ್ತೆ ಮಾರ್ಗಗಳಲ್ಲಿ ಸಂಚರಿಸಬೇಕಿದ್ದ ಸುಮಾರು 19 ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ರೇಲ್ವೇ ಇಲಾಖೆ ಮೂಲಗಳು ತಿಳಿಸಿವೆ.

ಬೆಳಗ್ಗೆ 8:55 ರ ಸುಮಾರಿಗೆ ನಿಂತಿದ್ದ 13174 ಅಗರ್ತಲಾ - ಸೀಲ್ದಾ ಕಾಂಚನಜುಂಗಾ ಎಕ್ಸ್‌ಪ್ರೆಸ್‌ ರೈಲಿಗೆ ಸರಕು ಸಾಗಾಣಿಕಾ ಗೂಡ್ಸ್ ರೈಲು ಡಿಕ್ಕಿ ಹೊಡೆದು, ಪ್ರಯಾಣಿಕ ರೈಲಿನ ನಾಲ್ಕು ಹಿಂದಿನ ಕೋಚ್‌ಗಳು ಮತ್ತು ಸರಕು ರೈಲಿನ ಐದು ಬೋಗಿಗಳು ಹಳಿತಪ್ಪಿದವು. ಪರಿಣಾಮ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರ ಪೈಕಿ 15 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಭಾರತೀಯ ರೈಲ್ವೇ ಇಲಾಖೆ ಈ ಪ್ರದೇಶದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದು, ಇದು ಉತ್ತರ ಬಂಗಾಳ ಮತ್ತು ದೇಶದ ಈಶಾನ್ಯ ಭಾಗದಿಂದ ದೂರದ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ.