ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ವಂಚನೆ; ಕ್ರಮಕ್ಕೆ ಆಗ್ರಹ

ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ವಂಚನೆ; ಕ್ರಮಕ್ಕೆ ಆಗ್ರಹ Fraudulently offering plots to landless people; action demanded

ಸಂಡೂರು 27: ನಿವೇಶನ ರಹಿತ ಬಡ ಕುಟುಂಬಗಳಿಗೆ ನಿವೇಶನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಖರೀದಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘವು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದೆ.

ಸಂಡೂರು ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳೂರು ಗ್ರಾಮದ ಸ.ನಂ. 250/1 ಹಾಗೂ 242ರಲ್ಲಿ ಹುಬ್ಬಳ್ಳಿ ಮೂಲದ ಶುಜಾತ್ ಅಲಿ ಮನಿಯಾರ್ ಮತ್ತು ನೌಶೀನ್ ಎಸ್‌. ಮನಿಯಾರ್ ದಂಪತಿಗಳು ಕಳೆದ 14-03-2025ರಂದು ಮೂಲಿಮನಿ ತಿಪ್ಪೇಸ್ವಾಮಿ ತಂದೆ ಎಂ. ದೊಡ್ಡಪ್ಪ ಎಂಬುವರಿಂದ ಜಮೀನು ಖರೀದಿಸಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದರು ಎನ್ನಲಾಗಿದೆ.ಕೆಲವು ನಿವೇಶನಗಳನ್ನು ಮಾರಾಟ ಮಾಡಿದ ಬಳಿಕ ಉಳಿದ ನಿವೇಶನಗಳನ್ನು ನೀಡದೇ ಸುಮಾರು 45 ಲಕ್ಷ ರೂಪಾಯಿ ಪಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಾವು ಖರೀದಿಸಿದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಹೋದಾಗ ಮೂಲ ಭೂ ಮಾಲೀಕರಾದ ಮೂಲಿಮನಿ ತಿಪ್ಪೇಸ್ವಾಮಿ ಅವರು ಖರೀದಿದಾರರನ್ನು ತಡೆದು ಲೇಓಟ್ಗೆ ಬೀಗ ಹಾಕಿದ್ದಾರೆ ಎನ್ನಲಾಗಿದೆ.ಲೇಓಟ್ಗೆ ಬೀಗ ಹಾಕಿ ಸುಮಾರು ಎಂಟು ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಎರಡು ಬಾರಿ ಮಾತುಕತೆ ನಡೆಸಿ ನಿವೇಶನಗಳನ್ನು ಬಿಟ್ಟು ಕೊಡಲು ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸಂತ್ರಸ್ತರು ದೂರಿದ್ದಾರೆ. ಅಲ್ಲದೆ, ಹೆಚ್ಚುವರಿಯಾಗಿ 18 ಲಕ್ಷ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.ಈಗಾಗಲೇ ಒಂದು ನಿವೇಶನಕ್ಕಾಗಿ ತಲಾ 3.50 ಲಕ್ಷ ರೂಪಾಯಿ ಪಾವತಿಸಿರುವ ಬಡ ಕುಟುಂಬಗಳಿಗೆ ಮತ್ತಷ್ಟು ಹಣ ನೀಡಲು ಸಾಧ್ಯವಾಗುತ್ತಿಲ್ಲ. ನಿವೇಶನವೂ ಸಿಗದೇ, ಪಾವತಿಸಿದ ಹಣವೂ ವಾಪಸ್ ಸಿಗದೇ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ತಿಳಿಸಲಾಗಿದೆ.

ಸಾಮಾನ್ಯ ಅಧಿಕಾರ ಪತ್ರದ ಆಧಾರದ ಮೇಲೆ ಇಬ್ಬರೂ ಕರಾರು ಮಾಡಿಕೊಂಡಿದ್ದು, ಈಗ ಪರಸ್ಪರ ಸಂಬಂಧವಿಲ್ಲದಂತೆ ನಡೆದುಕೊಂಡು ಖರೀದಿದಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.ಸಾಲ ಮಾಡಿ ನಿವೇಶನ ಖರೀದಿಸಿರುವ ಅಮಾಯಕ ಬಡ ಕುಟುಂಬಗಳಿಗೆ ನ್ಯಾಯ ಒದಗಿಸಿ, ಖರೀದಿಸಿದ ನಿವೇಶನಗಳನ್ನು ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘವು ಸಹಾಯಕ ಆಯುಕ್ತರನ್ನು ಒತ್ತಾಯಿಸಿದೆ.